ಮೌಖರಿ 
 ಕ್ರಿ. ಶ. ಸು. 554 ರಿಂದ 606ರ ತನಕ ಉತ್ತರ ಪ್ರದೇಶದ ಪೂರ್ವಭಾಗ ಮಗಧದೇಶದ ಗಯಾ ಪ್ರದೇಶವನ್ನಾಳಿದ ಒಂದು ರಾಜ ಮನೆತನ. ಮೌಖರಿ ದೊರೆ ಈಶಾನವರ್ಮ ಕ್ರಿ. ಶ. 554ರಲ್ಲಿ ಗುಪ್ತ ವಂಶದ ಕೊನೆಯ ದೊರೆಯನ್ನು ಸೋಲಿಸಿ ಮಹಾರಾಜಾಧಿರಾಜನೆಂಬ ಬಿರುದು ತಳೆದು ಆಳ್ವಿಕೆ ಪ್ರಾರಂಭಿಸಿದ. ಆದರೆ ಈತ ಕ್ರಿ. ಶ. 550 ರಿಂದಲೇ ರಾಜನಾಗಿದ್ದನೆಂದೂ ಕೆಲವು ಕಡೆ ಉಲ್ಲೇಖವಿದೆ. 

ಮೌಖರಿ ಪ್ರಾಚೀನವಂಶವೊಂದರ ಹೆಸರು. ಪಾಣಿನಿ ಮತ್ತು ಪತಂಜಲಿಯರಿಗೆ ಈ ಹೆಸರು ತಿಳಿದಿತ್ತು. ಕ್ರಿ.ಶ.239ರ ಮೌರ್ಯ ಬ್ರಾಹ್ಮೀಲಿಪಿ ಶಾಸನವೊಂದು `ಮೋಖಲೀಣಂ ಎಂಚು ಮೌಖರಿಯ ಸೇನಾನಿಯೊಬ್ಬನನ್ನು ಉಲ್ಲೇಖಿಸಿದೆ. ಮೂರನೆಯ ಶತಮಾನದಲ್ಲಿ ಮೌಖರಿ ವಂಶದ ಹಲವು ಶಾಖೆಗಳು ರಾಜಪುಟಾಣ ಪ್ರದೇಶದಲ್ಲಿದ್ದುದಕ್ಕೆ ಶಾಸನಾಧಾರಗಳಿವೆ. ಮುಂದೆ ಪ್ರಖ್ಯಾತಿಗೆ ಬಂದ ಬಳಿಕ ಮೌಖರಿಗಳು ತಮ್ಮನ್ನು ಮಹಾಭಾರತ ಉಲ್ಲೇಖಿಸುವ ಮದ್ರದೇಶದ ರಾಜ ಅಶ್ವಪತಿಯ ವಂಶಜರೆಂದು ಗುರುತಿಸಿಕೊಂಡರು. `ಮುಖರ ಎಂಬ ಪದದಿಂದ `ಮೌಖರಿ ಉಗಮಿಸಿದೆ ಎಂದು ಹರ್ಷಚರಿತೆ ತಿಳಿಸುತ್ತದೆ. ಇವರನ್ನು ಅಶ್ವಪತಿ ವೈವಸ್ವತ ಮನುವಿನಿಂದ ಪಡೆದ ನೂರು ಮಕ್ಕಳ ವಂಶದವರೆಂದು ಕ್ರಿ. ಶ. 554ರ ಹರಹ ಶಾಸನ ಉಲ್ಲೇಖಿಸಿದೆ. 

		ಉತ್ತರ ಭಾರತದ ಇತಿಹಾಸದಲ್ಲಿ ಮೌಖರಿಗಳು ದೀರ್ಘಕಾಲ ಪಾತ್ರವಹಿಸಿದ್ದರು. ಇತ್ತೀಚೆಗೆ ಕೋಟಾ ಪ್ರಾಂತ್ಯದಲ್ಲಿ ದೊರಕಿರುವ ಮೂರು ಶಾಸನಗಳಲ್ಲಿ ಇವರನ್ನು ಮಹಾಸೇನಾಪತಿಗಳೆಂದು ವರ್ಣಿಸಿದೆ. ಬಾರಾಬರ್ ಮತ್ತು ನಾಗಾರ್ಜುನಿ ಬೆಟ್ಟಗಳ ಶಾಸನಗಳಲ್ಲಿ ಗಯಾಪ್ರದೇಶದಲ್ಲಿ ಕ್ರಿ.ಶ.6ನೆಯ ಶತಮಾನದ ಪೂರ್ವಾರ್ಧದಲ್ಲಿ ಯಜ್ಞವರ್ಮ, ಈತನ ಮಗ ಶಾರ್ದೂಲವರ್ಮ ಮತ್ತು ಶಾರ್ದೂಲವರ್ಮನ ಮಗ ಅನಂತವರ್ಮ ಎಂಬ ಮೂವರು ಮೌಖರಿ ಅರಸು ಆಳುತ್ತಿದ್ದರೆಂಬ ಉಲ್ಲೇಖವಿದೆ. ಇವರೆಲ್ಲ ಗುಪ್ತ ಸಾಮ್ರಾಟರ ಸಾಮಂತರಾಗಿದ್ದರೆಂದು ತಿಳಿದು ಬರುತ್ತದೆ. 

ಕನೂಜಿನ ಮೌಖರಿವಂಶದ ಅರಸರು ಹೆಚ್ಚು ಪ್ರಸಿದ್ಧ. ಈ ವಂಶದ ರಾಜಮುದ್ರೆಗಳು ಮಹಾರಾಜ ಹರಿವರ್ಮ ಮತ್ತು ಆತನ ಅರಸಿ ಜಯಸ್ವಾಮಿನಿ, ಮಹಾರಾಜ ಆದಿತ್ಯವರ್ಮ ಹಾಗೂ ಹರ್ಷಗುಪ್ತ ಉಪಗುಪ್ತಾ ಮತ್ತು ಮಹಾರಾಜಾಧಿರಾಜ ಈಶಾನವರ್ಮ ಮತ್ತು ಲಕ್ಷ್ಮೀಪತಿ, ಮಹಾರಾಜಾಧಿರಾಜ ಸರ್ವವರ್ಮ ಮತ್ತು ಇಂದ್ರಭಟ್ಟಾರಿಕಾ ಹಾಗೂ ಅವಂತಿವರ್ಮ ಮೊದಲಾದ ಅರಸರ ಹಾಗೂ ಅವರ ಪತ್ನಿಯರ ಹೆಸರನ್ನು ಒಳಗೊಂಡಿದೆ. ಮೊದಲಿನ ಹಲವು ದೊರೆಗಳು ಸಮಕಾಲೀನ ಮಗಧದ ಉತ್ತರ ಕಾಲೀನ ಗುಪ್ತ ಅರಸರೊಡನೆ ವಿವಾಹ ಸಂಬಂಧ ಬೆಳೆಸಿದ್ದರೆಂದೂ ಹಾಗೂ ಅವರ ಸಾಮಂತರೂ ಆಗಿದ್ದರೆಂದೂ ತಿಳಿದುಬರುತ್ತದೆ. ಈಶಾನವರ್ಮನ ಕಾಲದಿಂದ ಈ ವಂಶದ ಪ್ರತಿಷ್ಠೆ-ಗೌರವ ಹೆಚ್ಚಿತೆಂದು ಈತ ಧರಿಸಿದ ಬಿರುದುಗಳಿಂದ ಗೊತ್ತಾಗುತ್ತದೆ. ಈತನ ಹಾಗೂ ಈನತ ಮಗ ಸರ್ವವರ್ಮನ ಕಾಲದಲ್ಲಿ ಉತ್ತರಕಾಲೀನ ಗುಪ್ತರೊಡನೆ ಸಂಘರ್ಷವೇರ್ಪಟ್ಟಿತು. ಮೊದಲು ಈಶಾನವರ್ಮ ಸೋತರೂ ತರುವಾಯ ಸರ್ವವರ್ಮ ಜಯಸಾಧಿಸಿದ. ಈಶಾನವರ್ಮನನ್ನು ಮೌಖರಿ ವಂಶದ ಮೊದಲ ಸ್ವತಂತ್ರ ರಾಜನೆಂದು ವಿದ್ವಾಂಸರು ಪರಿಗಣಿಸಿದ್ದಾರೆ. 

ಈಶಾನವರ್ಮ ಒಬ್ಬ ಸಮರ್ಥದೊರೆ. ಈತ ಆಂಧ್ರರು, ಶೂಲಿಕರು ಹಾಗೂ ಗೌಡದೇಶದವರ ಮೇಲೆ ಯುದ್ಧಮಾಡಿ ಜಯಗಳಿಸಿದನೆಂದು ಶಾಸನಗಳಿಂದ ತಿಳಿದು ಬರುತ್ತದೆ. ಕ್ರಮವಾಗಿ ಇದು ಪೂರ್ವ ಮತ್ತು ಪಶ್ಚಿಮ ದಖನ್ ಪ್ರದೇಶದಲ್ಲಿ ಆಳುತ್ತಿದ್ದ ವಿಷ್ಣು ಕುಂಡಿನ್ ಮತ್ತು ಚಾಳುಕ್ಯರನ್ನು ಹಾಗೂ ಬಂಗಾಲದಲ್ಲಿ ಆಳುತ್ತಿದ್ದ ವಂಶವೊಂದನ್ನು ಸೂಚಿಸುತ್ತದೆಂದು ಭಾವಿಸಲಾಗಿದೆ. ಈಶಾನವರ್ಮ ಮತ್ತು ಆತನ ಮಗ ಸರ್ವವರ್ಮರು ಹೂಣರೊಡನೆ ಕಾದಾಡಿ ಅವರನ್ನು ಸೋಲಿಸಿದರು. 

		ಸರ್ವವರ್ಮ ಮತ್ತು ಅವಂತಿವರ್ಮರು ಪ್ರಬಲ ಅರಸರಾಗಿದ್ದರು. ಸರ್ವವರ್ಮನಿಂದ ಪ್ರಾಯಶಃ ಗುಪ್ತದೊರೆ ದಾಮೋದರ ಪರಾಜಿತನಾದ. ಇವರೀರ್ವರ ಕಾಲದಲ್ಲಿ ಮಗಧದ ಭಾಗಗಳು ಮತ್ತು ಈಗಿನ ಉತ್ತರಪ್ರದೇಶ ಇವರ ಆಡಳಿತವ್ಯಾಪ್ತಿಗೆ ಸೇರಿತ್ತೆಂದು ಹೇಳಬಹುದು. ಮೌಖರಿ ಅರಸ್ ಶಾಸನ-ನಾಣ್ಯಾಧಾರಗಳೆಲ್ಲ ಇಲ್ಲಿಯೇ ದೊರೆತವು. ಅವಂತಿವರ್ಮ ಮತ್ತು ಈತನ ಮಗನ ಕಾಲಕ್ಕೆ ಕನೂಜ್ ರಾಜಧಾನಿಯಾಗಿತ್ತೆಂದು ತೋರುತ್ತದೆ. ಈಶಾನವರ್ಮ ಕ್ರಿ. ಶ. ಸು. 550 ರಿಂದ 576ರ ತನಕ, ಸರ್ವವರ್ಮ 576 ರಿಂದ 580ರ ತನಕ ಹಾಗೂ ಅವಂತಿವರ್ಮ 580 ರಿಂದ 606ರ ತನಕ ಆಳಿದರೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಅರಸರ ತೇದಿ ಇರುವ ನಾಣ್ಯಗಳು ದೊರೆತಿವೆ. 

ಬಾಣನ `ಹರ್ಷಚರಿತದ ಪ್ರಕಾರ ಗೃಹವರ್ಮ ಅವಂತಿವರ್ಮನ ಮಗ ಹಾಗೂ ಉತ್ತರಾಧಿಕಾರಿ. ಈತ ಸ್ಥಾಣೇಶ್ವರದ ಪುಷ್ಯಭೂತಿ ವಂಶದ ಪ್ರಭಾಕರವರ್ಧನನ ಮಗಳೂ ರಾಜ್ಯವರ್ಧನ ಮತ್ತು ಹರ್ಷವರ್ಧನರ ಸೋದರಿಯೂ ಆದ ರಾಜ್ಯಶ್ರೀಯನ್ನು ವಿವಾಹವಾದ. ಆದರೆ ಮಾಳವದ ರಾಜ ದೇವಗುಪ್ತ ಗೃಹವರ್ಮನನ್ನು ಕೊಂದು ರಾಜ್ಯಶ್ರೀಯನ್ನು ಕನೂಜಿನಲ್ಲಿ ಸೆರೆಯಿಟ್ಟ. ಮುಂದೆ ರಾಜ್ಯವರ್ಧನ ಮಾಳವದ ರಾಜನನ್ನು ಕೊಂದು ತಂಗಿಯನ್ನು ಸೆರೆಯಿಂದ ಬಿಡಿಸಿದನೆಂದೂ ಗೌಡದೇಶದ ರಾಜ ಶಶಾಂಕ ರಾಜ್ಯವರ್ಧನನನ್ನು ತನ್ನ ಅರಮನೆಗೆ ಸ್ವಾಗತಿಸಿ, ರಾಜ್ಯವರ್ಧನ ನಿರಾಯುಧನಾಗಿದ್ದಾಗ ಕೊಂದನೆಂದೂ ಅನಂತರ ಹರ್ಷವರ್ಧನ ಇವನನ್ನು ಕೊಂದನೆಂದೂ ಹೇಳುವುದುಂಟು. ಗೃಹವರ್ಮನ ತರುವಾಯ ಆ ಪ್ರದೇಶವೆಲ್ಲ ಹರ್ಷವರ್ಧನನ ಸಾಮ್ರಾಜ್ಯಕ್ಕೆ ಸೇರಿತು. ಗೃಹವರ್ಮನ ಮರಣದೊಂದಿಗೆ ಮೌಖರಿ ವಂಶದವರ ಆಳ್ವಿಕೆ ಮುಗಿಯಿತು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ